ಯೂಸುಫ್ ಅರಕ್ಕಲ್
	1994. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪುರಸ್ಕøತರಾಗಿರುವ ಒಬ್ಬ ಸೃಜನಶೀಲ ಕಲಾವಿದ. ಕಲೆ ಸಾಮಾಜಿಕ ಬದ್ಧತೆಯಿಂದ ಕೂಡಿರಬೇಕೆನ್ನುವ ಯೂಸುಫ್ ಅರಕ್ಕಲ್, ಅದರ ಅಭಿವ್ಯಕ್ತಿಗಾಗಿ ಆರಿಸಿಕೊಂಡಿರುವ ಮಾಧ್ಯಮ, ವರ್ಣಚಿತ್ರ, ಗ್ರಾಫಿಕ್ಸ್, ಶಿಲ್ಪ.

	ಕೇರಳದ ಚೌತಾಟ್‍ನಲ್ಲಿ ಜೂನ್ 10, 1945ರಲ್ಲಿ ಜನನ. ಬಾಲ್ಯದಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡರು. ಬೆಂಗಳೂರಿಗೆ ಬಂದು ತಮ್ಮ ಚಿಕ್ಕಪ್ಪನವರಲ್ಲಿ ಆಶ್ರಯ. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಕಾರ್ಯಾಗಾರಗಳಲ್ಲಿ ಕೆಲಸ. ಅನಂತರ ವಿಮಾನ ನಿರ್ಮಾಣ ಕಾರ್ಖಾನೆ ಸೇರ್ಪಡೆ. ಚಿಕ್ಕಂದಿನಲ್ಲಿಯೇ ಚಿತ್ರ ಬರೆಯುವ ಗೀಳು. ಬಿಡುವಿದ್ದಾಗಲೆಲ್ಲಾ ಸ್ಕೆಚ್ ಮಾಡುವುದೇ ಹವ್ಯಾಸ. ಎಂ ಎಸ್ ನಂಜುಂಡರಾಯರು ನಡೆಸುತ್ತಿದ್ದ ಚಿತ್ರಕಲಾಪರಿಷತ್ತಿಗೆ ಸೇರಿ ಕಲಾಭ್ಯಾಸ. ಮುಂದೆ ಅವರ ಜೀವನದ ದಿಕ್ಕು ಸಂಪೂರ್ಣವಾಗಿ ಬದಲಾಯಿತು. ಚಿತ್ರಕಲಾಪರಿಷತ್ತಿಗೆ ಸೇರಿದ ಆರಂಭದಲ್ಲೇ ಲಲಿತಕಲಾ ಅಕಾಡೆಮಿಯ ಕಲಾಪ್ರದರ್ಶನದಲ್ಲಿ ಇವರು ರಚಿಸಿದ ಕಲಾಕೃತಿ ಪ್ರದರ್ಶನಕ್ಕೆ ಆಯ್ಕೆಯಾಯಿತು. ಮೂರನೇ ವರ್ಷದಲ್ಲಿ ಅಭ್ಯಸಿಸುತ್ತಿದ್ದಾಗಲೇ ಎಂ ವಿ ಮಿಣಜಗಿಯವರು ದಾವಣಗೆರೆಯ ಕಲಾಶಾಲೆಗೆ ಇವರ ಕೃತಿಯೊಂದನ್ನು ಕೊಂಡರು. ಇವೆರಡೂ ಘಟನೆಗಳು ಯೂಸುಫ್ ಅವರ ಆತ್ಮವಿಶ್ವಾಸ ಹೆಚ್ಚಿಸಿತಲ್ಲದೆ ಕಲಾಕ್ಷೇತ್ರದಲ್ಲಿಯೇ ನೆಲೆ ಕಂಡುಕೊಳ್ಳಬಹುದೆಂಬ ಭಾವನೆ ಬೆಳೆಯಿತು.

	ಆರಂಭದಿಂದಲೇ ಯೂಸುಫ್ ಕಲೆಯ ಬಗ್ಗೆ ನಿಶ್ಚಿತ ಧೋರಣೆಯನ್ನು ಹೊಂದಿದ್ದರು. ಒಮ್ಮೆಗೇ ಒಂದು ವಿಷಯ ತೆಗೆದುಕೊಂಡು ಸರಣಿಯಂತೆ ಹಲವಾರು ಕೃತಿಗಳನ್ನು ರಚಿಸಿ ಅದರ ಎಲ್ಲಾ ಸಾಧ್ಯಾಸಾಧ್ಯತೆಗಳನ್ನು ತೆರೆದು ಇರಿಸುತ್ತಿದ್ದರು. ಅವುಗಳಲ್ಲಿ ಮೊದಲ ಸರಣಿ `ಚಕ್ರಗಳು ಅದು ಅವರ ವೃತ್ತಿಜೀವನದ ಯಂತ್ರಗಳ ಒಡನಾಟದಿಂದ ರೂಪುಗೊಂಡಿದ್ದು, ನಂತರದ ಸರಣಿ `ಕೊಳವೆಗಳು ಇದೂ ಸಹ ನೀರಿಗಾಗಿ ತಂದ ಬೃಹದಾಕಾರದ ಕೊಳವೆಗಳಲ್ಲೇ ವಾಸಿಸುತ್ತಿದ್ದ ಜನರನ್ನು ಕಂಡು ರಚಿತವಾದದ್ದು. ಮುಂದಿನ ಸರಣಿ "ರಸ್ತೆಯಲ್ಲಿ ಸತ್ತ ಭಾರತೀಯ ನಿರಾಶ್ರಿತರಿಗೆ ಶ್ರದ್ಧಾಂಜಲಿ". ಈ ಸರಣಿಯ ಚಿತ್ರವೊಂದಕ್ಕೆ 1983ರಲ್ಲಿ ಕೇಂದ್ರ ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ದೊರೆಯಿತು.

	ಇಂತಹ ಸರಣಿಗಳ ಆರಂಭದ ಹಂತದಲ್ಲಿಯೇ ಕಲಾಕೃತಿಗಳ ಅರ್ಥದ ಬಗ್ಗೆ ನಿಶ್ಚಿತವಾದ ಧೋರಣೆಯೊಂದು ಅವರಲ್ಲಿತ್ತು; `ಕಲೆ, ಸಾಮಾಜಿಕ ಬದ್ಧತೆಯಿಂದ ಕೂಡಿರಬೇಕು. ಕಲೆಗಾಗಿ ಕಲೆ ಎಂಬ ಮಾತಿಗೆ ಅರ್ಥವಿಲ್ಲ. ಕಲಾಕೃತಿಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವಾಗದಿದ್ದರೂ, ಕನಿಷ್ಟ ನೋಡುಗರನ್ನು ಚಿಂತಿಸುವಂತೆ ಪ್ರೇರೇಪಿಸಿದರೆ ಸಾಕು. ಆದರೆ ಅದೇ ವೇಳೆಯಲ್ಲಿ ಕೃತಿಗಳು ಘೋಷಣೆಯ ಭಿತ್ತಿ ಪತ್ರವಾಗದಂತೆ ಕಲಾತ್ಮಕವಾಗಿಯೂ ಇರಬೇಕಾದುದು ಅತ್ಯವಶ್ಯಕ. ತಮ್ಮ ಕೃತಿಗಳ ಬಗ್ಗೆ ಖಚಿತವಾದ ಅಭಿಪ್ರಾಯ ಹೊಂದಿರುವ ಯೂಸುಫ್ ಒಂದೆಡೆ ಈ ರೀತಿ ಹೇಳಿದ್ದಾರೆ. "ಸಾಮಾನ್ಯ ಜನರು ನನ್ನಲ್ಲಿ ಕುತೂಹಲ ಮೂಡಿಸುತ್ತಾರೆ. ಅವರ ಬವಣೆಗಳು ನನ್ನನ್ನು ಚಿಂತನೆಯಲ್ಲಿ ತೊಡಗಿಸುತ್ತವೆ. ನನ್ನ ಕಲಾಸೃಷ್ಟಿಗಳು ತಳಮಳಗೊಂಡಿರುವ, ಮಾನವೀಯ ಗೌರವವಿಲ್ಲದ ಬೆಡಗಿನ ಮೂಲಕ್ಕೆ, ಶಾಂತಿ ಹಾಗೂ ಈ ನೆಲದ ಮೇಲೆ ಮಾನವರಾಗಿ ಬದುಕಲು ಸಾಧ್ಯವಾಗುವಂತಹ ಒಂದು ವಾತಾವರಣಕ್ಕೆ ನೀಡಿದ ಪ್ರತಿಕ್ರಿಯೆಗಳಾಗಿವೆ. ನೋವು, ತಿರಸ್ಕಾರ, ಅನಿಶ್ಚಿತತೆ, ದುರ್ಬಲ ಅಸ್ತಿತ್ವ, ವಿನಾಶದ ಯಂತ್ರಗಳಿಂದ ತುಂಬಿದ ವಿಶ್ವದಲ್ಲಿನ ಯಾತನಾಮಯ ಜೀವನ ಇವುಗಳು ಮಾನವನ ಬುದ್ಧಿವಂತಿಕೆಯ ಉತ್ಪಾದನೆಗಳಾಗಿರುವುದು ವಿಧಿಯ ಅಣಕವಾಗಿದೆ." ಹೀಗಾಗಿ ಯೂಸುಫ್‍ರ ಕಲಾಕೃತಿಗಳಲ್ಲಿ ಬಂಡಾಯ ಸಾಹಿತ್ಯದವರ ಆಕ್ರೋಶ, ಸಿಟ್ಟುಗಳು ನೇರವಾಗಿ ಕಂಡುಬರದೇ ಹೋದರೂ, ಬಂಡಾಯದ ಧ್ವನಿ ಅಂತರ್ಗತವಾಗಿರುವ ಬಗ್ಗೆ ವಿಮರ್ಶಕರು ಗುರುತಿಸಿದ್ದಾರೆ.

	ಮಾನವ ಕಾಳಜಿ ಕೇಂದ್ರಿತ ಆಶಯಕ್ಕಿಂತ ಹೊರತಾಗಿಯೂ ಕೆಲವು ಸರಣಿಚಿತ್ರಗಳನ್ನು ರಚಿಸಿದ್ದಾರೆ. ಯಾವುದೇ ನಿರ್ದಿಷ್ಟ ವಸ್ತುಗಳಿಲ್ಲದ, ಆಕಾರಗಳಿಲ್ಲದ ಆದರೆ ಮೈವಳಿಕೆಯಿಂದ ಕೂಡಿದ ಬಣ್ಣದ ಹರಹುಗಳು ಇರಿಸಿ ಹಲವಾರು ಚಿತ್ರಗಳನ್ನು ರಚಿಸಿದ್ದಾರೆ. ಅಂತೆಯೇ ನಗ್ನಚಿತ್ರಸರಣಿ ಹಾಗೂ ಗಂಗಾಸರಣಿಗಳಲ್ಲಿ ಮಾನವಾಕಾರಗಳಿದ್ದರೂ ಶ್ರೀಸಾಮಾನ್ಯನ ಬದುಕಿನ ಬವಣೆಗಳು ಕಂಡುಬರುವುದಿಲ್ಲವೆಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಆದರೆ ಇಲ್ಲಿಯೂ ಸ್ತ್ರೀ ಶೋಷಣೆಯ ಅಭಿವ್ಯಕ್ತಿಯನ್ನು ಗುರುತಿಸಬಹುದು. ಇತ್ತೀಚೆಗೆ ಯೂಸುಫ್ ಅವರು ಖ್ಯಾತಕಲಾವಿದರ ಪ್ರಸಿದ್ಧ ಚಿತ್ರಗಳ ಪ್ರತಿರೂಪವನ್ನು ಕ್ಯಾನ್ವಾಸ್‍ನ ಒಂದು ಭಾಗದಲ್ಲಿ ಕಿರು ಆಕಾರದಲ್ಲಿ ರಚಿಸಿ, ಉಳಿದಂತೆ ತಮ್ಮ ಎಂದಿನ ಶೈಲಿಯಲ್ಲಿ ಬಣ್ಣದ ಹರಹುಗಳಿಂದ ತುಂಬಿಸುತ್ತಿದ್ದಾರೆ. ಇದು ಒಂದು ಅರ್ಥದಲ್ಲಿ ಪ್ರಸಿದ್ಧ ಕಲಾವಿದರಿಗೆ ನೀಡುವ ಗೌರವವೆಂದು ಹೇಳಬಹುದು.

	ಯೂಸುಫ್ ಅವರು ಶಿಲ್ಪಕಲೆಯಲ್ಲಿಯೂ ಅಭಿವ್ಯಕ್ತಿಸಿದ್ದಾರೆ. ಮೊದಲಿಗೆ ಅಮೂರ್ತ ಶಿಲ್ಪಗಳನ್ನು ರಚಿಸುತ್ತಿದ್ದು, ನಂತರ ಮೂರ್ತಶಿಲ್ಪಗಳ ರಚನೆಯತ್ತ ತಿರುಗಿದರು. ಲೋಹದ ತುಣುಕುಗಳನ್ನು ಬೆಸುಗೆ ಹಾಕಿ ರಚಿಸಿರುವುದೂ ಉಂಟು. ಟೆರ್ರಾಕೋಟ ಮಾಧ್ಯಮದಲ್ಲಿ "ಆಫ್ರಿಕನ್ ಕ್ಷಾಮ" ಶೀರ್ಷಿಕೆಯಲ್ಲಿ ಹಲವಾರು ಉಬ್ಬುಶಿಲ್ಪಗಳನ್ನು ಸರಣಿಯಂತೆ ರೂಪಿಸಿದ್ದಾರೆ. ಭಿತ್ತಿಗೆ ಮ್ಯೂರಲ್‍ನಂತೆ ಹೊಂದಿಸಬಹುದಾದ ಕಲಾಕೃತಿಗಳಲ್ಲಿಯೂ ಆಫ್ರಿಕಾದ ಜನರ ದುಃಖ ದುಮ್ಮಾನಗಳನ್ನು ಕಾಣಬಹುದು. ಇವಲ್ಲದೆ ಕಂಚು ಹಾಗೂ ಮರದ ಮಾಧ್ಯಮದಲ್ಲೂ ಶಿಲ್ಪಗಳನ್ನು ರಚಿಸಿದ್ದಾರೆ. ಗ್ರಾಫಿಕ್ ಮಾಧ್ಯಮದಲ್ಲಿಯೂ ಯೂಸುಫ್ ಅವರು ಕೆಲವು ಕೃತಿಗಳನ್ನು ರಚಿಸಿದ್ದಾರೆ.

	ವಸ್ತು, ವಿಷಯಗಳು ಶೈಲೀಕೃತವಾಗದಿದ್ದರೂ, ಬಣ್ಣಗಾರಿಕೆ ಹಾಗೂ ತಂತ್ರಗಾರಿಕೆಯಲ್ಲಿ ಕೆಲವು ವೈಶಿಷ್ಟ್ಯಗಳನ್ನು ಉಳಿಸಿಕೊಂಡಿದ್ದಾರೆ. ಕೆಲವೇ ವರ್ಣಗಳಲ್ಲಿ ಅದರಲ್ಲೂ ಕಪ್ಪು ಮತ್ತು ಕಂದುಬಣ್ಣಗಳು ಅಧಿಕವಾಗಿರುವಂತೆ ಕೆಲವೆಡೆ ದಪ್ಪನಾಗಿ ಇಲ್ಲವೆ ಜಲವರ್ಣದಂತೆ ತೆಳುವಾಗಿ ವರ್ಣಲೇಪನ ಮಾಡಿ ಕಾಗದ, ಬಟ್ಟೆ ಅಥವಾ ಪ್ಲಾಸ್ಟಿಕ್ ಹಾಳೆಯನ್ನು ತೈಲವರ್ಣ ಲೇಪಿತ ಜಾಗದ ಮೇಲೆ ಮೃದುವಾಗಿ ಒತ್ತಿ ತೆಗೆಯುವುದರಿಂದ ಒಂದು ವಿಧವಾದ ಮೈವಳಿಕೆ ಬರುವಂತೆ ಮಾಡುತ್ತಾರೆ. ಇಡೀ ಫಲಕದಲ್ಲಿ ಒಂದೆರಡೇ ಆಕಾರಗಳು ಇದ್ದು, ಅವುಗಳಿಗೆ ಹೊರರೇಖೆ ಹಾಕದಂತೆ, ಹಿನ್ನಲೆಯಲ್ಲಿ ಅಂತರ್ಗತವಾದಂತೆ, ಆಕೃತಿಗಳಲ್ಲಿ ಬೆಳಕಿರುವ ಸ್ಥಳಗಳಲ್ಲಿ ಬಣ್ಣಗಳನ್ನು ತೆಗೆಯುವುದರ ಮೂಲಕ ನೆರಳಿನ ಭಾಗದಲ್ಲಿ ಕಡುಕಂದು ಬಣ್ಣವನ್ನು ಉಳಿಸಿಕೊಳ್ಳುವುದರ ಮೂಲಕ ಮೂರು ಆಯಾಮಗಳನ್ನು ತರುತ್ತಾರೆ. ಇದಲ್ಲದೆ ಕುಂಚದ ಹಿಂದಿನ ಮೊನೆಯಂತಹ ಭಾಗದಿಂದಲೂ ಬಣ್ಣಗಳನ್ನು ತೆಗೆಯುವುದರ ಮೂಲಕ ರೇಖಾಚಿತ್ರದಂತಹ ಆಕಾರಗಳನ್ನು ಮೂಡಿಸುತ್ತಾರೆ. ಒಟ್ಟು ನೋಟದಿಂದಲೇ ಫಲಕಗಳಲ್ಲಿ ಅಲ್ಪ ಪ್ರಮಾಣದ ಬೆಳಕಿನಿಂದ ಪೂರ್ಣ ಪ್ರಮಾಣದ ಕತ್ತಲೆಗೆ ದೃಷ್ಟಿ ಸರಿಯುವಂತಿದ್ದು, ಮೂಲವಿಷಯಕ್ಕೆ ಪೂರಕವಾಗುವಂತೆ ಅಭಿವ್ಯಕ್ತಿಸುತ್ತಾರೆ.

	ಮೊದಲಿಗೆ ಯೂಸುಫ್ ಅವರು ಏಕವ್ಯಕ್ತಿ ಪ್ರದರ್ಶನ, ಗುಂಪು ಪ್ರದರ್ಶನ ಹಾಗೂ ಸಾಮೂಹಿಕ ಪ್ರದರ್ಶನಗಳಲ್ಲಿ ಕೃತಿಗಳನ್ನು ಪ್ರದರ್ಶಿಸುತ್ತಿದ್ದರು. ಈಚೆಗೆ ದೇಶ, ಹೊರದೇಶಗಳಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ಕಲಾಸ್ಪರ್ಧೆಗಳಿಗೆ, ಪ್ರದರ್ಶನಗಳಿಗೆ ಹಾಗೂ 2 - 3 ವರ್ಷಗಳಿಗೊಮ್ಮೆ ನಿಯಮಿತವಾಗಿ ನಡೆಯುವ ಜಾಗತಿಕ ಮಟ್ಟದ ಕಲಾಪ್ರದರ್ಶನಗಳಿಗೆ ಕೃತಿಗಳನ್ನು ಕಳಿಸುತ್ತಾರೆ ಹಾಗೂ ತಪ್ಪದೆ ಯಾವುದಾದರೊಂದು ಪ್ರಶಸ್ತಿ ಅಥವಾ ಬಹುಮಾನವನ್ನು ಪಡೆಯುತ್ತಾರೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ, ಇಂಡಿಯನ್ ಆರ್ಟಿಸ್ಟ್ ಎಟ್ ಬೈಲೋರಷ್ಯಾ ಎಂಡ್ ಮಾಸ್ಕೊ(1971), ಕ್ಯೂಬಾದಲ್ಲಿ 20 ಭಾರತೀಯ ಸಮಕಾಲೀನರ ಪ್ರದರ್ಶನ(1985), ಮೆಕ್ಸಿಕೋದ ನ್ಯಾಷನಲ್ ಮ್ಯೂಸಿಯಂನಲ್ಲಿ ಭಾರತೀಯ ಕಲಾವಿದರು(1985), ಜಪಾನಿನ ಎರಡನೇ ಏಷ್ಯನ್ ಕಲಾ ಪ್ರದರ್ಶನ(1985), ಅಮೆರಿಕಾದಲ್ಲಿ ಭಾರತೀಯ ಉತ್ಸವ (1985), ಫ್ರಾನ್ಸ್‍ನಲ್ಲಿ ಆರನೆಯ ಬೈನಾಲೆ(1986), ಬಾಂಗ್ಲಾದೇಶದಲ್ಲಿ ಮೂರನೇ ಏಷ್ಯನ್ ಬೈನಾಲೆ(1986), ಕೊರಿಯಾದ ಸಿಯೋಲ್‍ನಲ್ಲಿ ನ್ಯಾಷನಲ್ ಮ್ಯೂಸಿಯಂ ಆಫ್ ಮಾಡರನ್ ಆರ್ಟ್ ಪ್ರದರ್ಶನ(1986), ನವದೆಹಲಿಯ ಆರನೇ ಟ್ರೆನಾಲೆ(1986), ಬ್ರೆಜಿಲ್‍ನ 9ನೇ ಅಂತರರಾಷ್ಟ್ರೀಯ ಬೈನಾಲೆ(1987), ನ್ಯೂಯಾರ್ಕ್‍ನ ಸಿಸಿಎ ಗ್ಯಾಲರಿಯಲ್ಲಿ ಒಂಬತ್ತು ಭಾರತೀಯರ ಕಲಾಪ್ರದರ್ಶನ(1993), ಬ್ರಿಟಿಷ್ ಕೊಲಂಬಿಯಾದಲ್ಲಿ ಇಂಡಿಯನ್ ಪ್ರಿಂಟ್ ಮೇಕಿಂಗ್ ಪ್ರದರ್ಶನ(1993), ಹಾಂಕಾಂಗ್‍ನ ಗ್ಯಾಲರಿ ಮಾಯಾದಲ್ಲಿ ಪ್ರದರ್ಶನ(1994, 1995 ಮತ್ತು 1996), ಟೋಕಿಯೊ ಪ್ರದರ್ಶನ(1996), ಲಂಡನ್‍ನ ಕ್ರಿಸ್ಟೀಸ್ ಹರಾಜು ಪ್ರದರ್ಶನ(1996 ಮತ್ತು 1997), ಹಾಂಕಾಂಗ್‍ನಲ್ಲಿ ಸ್ಟಿರಿಟ್ ಮತ್ತು ಸೋಲ್(1998), ಜರ್ಮನಿಯ ಬೈಯಾರ್(1998); ಡರ್ಬಾನ್‍ನಲ್ಲಿ ಮಾನವ ಹಕ್ಕುಗಳ ಜಾಗತಿಕ ಶೋಷಣೆ(1999), ಜಿನೀವಾದ ಯು.ಡಿ.ಎಚ್.ಆರ್.(2000), ಕೆನಡಾದಲ್ಲಿ ಏಡ್ಸ್ ಜಾಗೃತಿ(2000), ಕೈರೋ ಬೈನಾಲೆ(2001), ಸಿಂಗಪುರದಲ್ಲಿ ಭಾರತದ ಶ್ರೇಷ್ಠ ಕಲೆಗಳು(2001), ಫ್ಲಾರೆನ್ಸ್ ಬೈನಾಲೆ(2003), ರಾಷ್ಟ್ರೀಯ ಬೈನಾಲೆ(2005) ಇತ್ಯಾದಿ ಉದಾಹರಿಸಬಹುದು.

	ಥೈಲೆಂಡ್, ರಷ್ಯ, ಟರ್ಕಿಗಳಲ್ಲಿ 2005ರಲ್ಲಿ ನಡೆದ ಕಲಾಶಿಬಿರಗಳಲ್ಲಿ ಭಾಗವಹಿಸಿದ್ದಾರೆ. 1979 ಮತ್ತು 1981ರಲ್ಲಿ ರಾಜ್ಯ ಪ್ರಶಸ್ತಿ, 1983ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1986ರಲ್ಲಿ ಡಾಕಾ ಬೈನಾಲೆ ಪ್ರಶಸ್ತಿ, 1986ರಲ್ಲಿ ರಾಜ್ಯ ಗೌರವ ಪ್ರಶಸ್ತಿ, 1999ರಲ್ಲಿ ರಾಜ್ಯೋತ್ಸವ ಪ್ರಶಸ್ತಿ; ರುಮೇನಿಯಾದ ಅರಾದ್ ಬೈನಾಲೆ ಪ್ರಶಸ್ತಿ, ಫ್ಲಾರೆನ್ಸ್ ಬೈನಾಲೆಯಲ್ಲಿ 2003ರಲ್ಲಿ ಬೆಳ್ಳಿ ಪದಕ ಹಾಗೂ 2005ರಲ್ಲಿ ಚಿನ್ನದ ಪದಕ ಪ್ರಶಸ್ತಿ ಪಡೆದಿದ್ದಾರೆ.

	ಇಂಗ್ಲಿಷ್‍ನಲ್ಲಿ ಬರೆದ ಅನೇಕ ಪದ್ಯಗಳು, ಕಲಾಬರಹಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಪ್ರತಿಭಾನ್ವಿತ ಕಲಾವಿದನಿಗೆ ಕರ್ನಾಟಕ ಸರಕಾರ 2005ನೇ ಸಾಲಿನ `ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ನೀಡಿ ಗೌರವಿಸಿದೆ.

(ಎ.ಎಲ್‍ಎನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ